ಯಾರು ಒಲಿದರೇನು?
ರಾಗ: ಆನಂದಭೈರವಿ,   ತಾಳ: ಆದಿ;    
                                           
ಯಾರು ಒಲಿದರೇನು ನಮಗಿ-ನ್ನಾರು ಮುನಿದರೇನು
ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ  || ಪಲ್ಲವಿ||

ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು
ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು
ಮಾರಿಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ  |೧ ||

ಪಡೆದ ತಾಯಿ ತಂದೆ ನಮ್ಮೊಳು ಅಹಿತ ಮಾಡಿದರೇನು
ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು
ಒಡನಾಡುವ ಗೆಳೆಯರು ನಮ್ಮೊಳು ವೈರವ ಬೆಳೆಸಿದರೇನು
ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ  || ೨ ||

ಕಾನನದೊಳ್ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕೀಟ ಕ್ರಿಮಿಗಳು ಚರ್ಮಕೆ ಮುತ್ತಿದರೇನು
ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು
ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ  || ೩ ||ದಾಸವಾಣಿ
ರಚನೆ : ಪುರಂದರದಾಸರು.

ನೋಡಿ
 ಪುರಂದರದಾಸರ ಸಾಹಿತ್ಯ
 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ